ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ಗೆ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ `ಬಿಯಾಂಡ್ ಬೆಂಗಳೂರು' ಮಿಷನ್ ಅಡಿಯಲ್ಲಿ 1.93 ಕೋಟಿ ರೂ. ಅನುದಾನ ನೀಡಿದೆ. ಬೆಂಗಳೂರಿನ ಹೊರಗೆ ತಂತ್ರಜ್ಞಾನ ಕೇಂದ್ರಗಳನ್ನು ನಿರ್ಮಿಸುವ ರಾಜ್ಯದ ಗುರಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಈ ಅನುದಾನವು ಮಂಗಳೂರಿನ ತಂತ್ರಜ್ಞಾನ ಪರಿಸರವನ್ನು ಬಲಪಡಿಸುವುದರೊಂದಿಗೆ, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಪ್ರಮುಖ ಮೈಲಿಗಲ್ಲಾಗಿದೆ.
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರು ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಅವರಿಗೆ ಅನುದಾನದ ಚೆಕ್ ಹಸ್ತಾಂತರಿಸಿದರು.
ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್ ಮಂಗಳೂರಿನಲ್ಲಿ ಪ್ರಮುಖ ವರ್ಕ್‌ಸ್ಪೇಸ್ ವೇದಿಕೆಯಾಗಿ ಬೆಳೆಯುತ್ತಿದ್ದು, ಕೇವಲ ಮೂಲಸೌಕರ್ಯವಷ್ಟೇ ಅಲ್ಲದೆ ಜಾಗತಿಕ ಕಂಪನಿಗಳು, ಜಿಸಿಸಿಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳು ವಿಶ್ವಾಸದಿಂದ ತಮ್ಮ ಕಾರ್ಯಾಚರಣೆಗಳನ್ನು ಆರಂಭಿಸಲು ಹಾಗೂ ವಿಸ್ತರಿಸಲು ಅಗತ್ಯವಾದ ಸಂಪೂರ್ಣ ಉದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ. ಈ ಕಾರಣದಿಂದಲೇ ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡಿದೆ
‘ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ ಬೆಂಗಳೂರಿನ ಹೊರಗಿನ ವರ್ಕ್‌ಸ್ಪೇಸ್ ಆಪರೇಟರ್‌ಗೆ ನೀಡಲಾದ ಮೊದಲ ಹಾಗೂ ಅತಿದೊಡ್ಡ ಅನುದಾನಗಳಲ್ಲಿ ಇದೂ ಒಂದು. ಕಳೆದ ಕೆಲವು ವರ್ಷಗಳಲ್ಲಿ ವರ್ಟೆಕ್ಸ್ ಮಂಗಳೂರಿನ ಐಟಿ ಮತ್ತು ಜಿಸಿಸಿ ಪರಿಸರ ವ್ಯವಸ್ಥೆಗೆ ಪ್ರಮುಖ ಆಧಾರವಾಗಿ ಹೊರಹೊಮ್ಮಿದೆ. ಪ್ರಸ್ತುತ ಆರು ನಿರ್ವಹಿತ ಕಾರ್ಯಸ್ಥಳಗಳಲ್ಲಿ 2,250 ಕ್ಕೂ ಹೆಚ್ಚು ವೃತ್ತಿಪರರಿಗೆ ಬೆಂಬಲ ನೀಡುತ್ತಿದ್ದು, 40ಕ್ಕೂ ಹೆಚ್ಚು ಕಂಪನಿಗಳಿಗೆ ಆತಿಥ್ಯ ವಹಿಸಿದೆ.
ಗುರುದತ್ತ ಶೆಣೈ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಕರ್ನಾಟಕ ಸರ್ಕಾರ ಮತ್ತು ಕೆಡಿಇಎಂ ನಮ್ಮ ಮೇಲಿಟ್ಟ ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ. ಈ ಅನುದಾನವು ಬೆಂಗಳೂರಿನ ಹೊರಗೆ ಐಟಿ ಮೂಲಸೌಕರ್ಯವನ್ನು ಬಲಪಡಿಸಲು, ಉದ್ಯಮ ವಿಸ್ತರಣೆಗೆ ಮತ್ತು ಗುಣಮಟ್ಟದ ಉದ್ಯೋಗ ಸೃಷ್ಟಿಗೆ ಪ್ರೇರಣೆಯಾಗಿದೆ. ವರ್ಟೆಕ್ಸ್ ಮುಂದಿನ ದಿನಗಳಲ್ಲಿ ಮಂಗಳೂರು ಕಾರ್ಯಾಚರಣೆಗಳನ್ನು 6,000 ಕಾರ್ಯಸ್ಥಳಗಳಿಗೆ ವಿಸ್ತರಿಸಿ, ನಗರವನ್ನು ತಂತ್ರಜ್ಞಾನ ಮತ್ತು ಜಿಸಿಸಿ ಗಮ್ಯಸ್ಥಾನವಾಗಿ ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ,” ಎಂದು ಹೇಳಿದರು.
ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್ ಕರ್ನಾಟಕದ ವಿಕೇಂದ್ರೀಕೃತ ತಂತ್ರಜ್ಞಾನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಸ್ಟಾರ್ಟ್ಅಪ್‌ಗಳು, ಸಣ್ಣ ಮತ್ತು ಮಧ್ಯಮಗಾತ್ರದ ಉದ್ಯಮಗಳು ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಸಿದ್ಧ ಮಾದರಿಯ ಕಾರ್ಯಸ್ಥಳಗಳನ್ನು ಒದಗಿಸುತ್ತಿದೆ. ಮಂಗಳೂರಿನ ಕಾರ್ಯಾಚರಣೆಗಳು ಉದ್ಯೋಗ ಸೃಷ್ಟಿ, ಸ್ಥಳೀಯ ಪ್ರತಿಭೆ ಉಳಿಸಿಕೊಳ್ಳುವುದು ಮತ್ತು ಪ್ರಾದೇಶಿಕ ಉದ್ಯಮ ವಿಸ್ತರಣೆಯಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ.

